ಬಗನಿ
	ಅರಿಕೇಸೀ ಕುಟುಂಬಕ್ಕೆ ಸೇರಿದ ವೃಕ್ಷ. ಕ್ಯಾರಿಯೋಟ ಯುರೆನ್ಸ್ ವೈಜ್ಞಾನಿಕ ಹೆಸರು. ಇದಕ್ಕೆ ಫಿಷಟೈಲ್ ಪಾಮ್, ಹಿಲ್‍ಪಾಮ್ ಇಂಡಿಯಸ್ಯಾಗೊ ಪಾಮ್. ಈಸ್ಟ್ ಇಂಡಿಯನ್ ವೈನ್ ಪಾಮ್, ಜಾಗರಿ ಪಾಮ್, ಕಿಟುಲ್‍ಮರ ಮೊದಲಾದ ಹೆಸರುಗಳಿವೆ. ಇದು ಭಾರತ ಮತ್ತು ಮಲಯ ದೇಶಗಳ ಮೂಲನಿವಾಸಿ; ಶ್ರೀಲಂಕಾ ಮತ್ತು ಬರ್ಮಗಳ ಹಾಗೂ ಪಶ್ಚಿಮ ಬಂಗಾಳ, ಅಸ್ಸಾಮ್, ಕೇರಳ, ಕರ್ನಾಟಕ ರಾಜ್ಯಗಳ ಕರಾವಳಿ ಪ್ರದೇಶಗಳಲ್ಲಿ ತೇವ ಹಾಗೂ ಹೆಚ್ಚು ಮಳೆಯಿಂದ ಕೂಡಿದ ಹವಾಗುಣವುಳ್ಳ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.

	ಇದು ರೆಂಬೆಗಳಿಲ್ಲದೆ ನೇರವಾಗಿ ಸುಮಾರು 12-20 ಮೀ ಎತ್ತರಕ್ಕೆ ಬೆಳೆಯುವುದು. ಕಾಂಡದ ವ್ಯಾಸ 30-45 ಸೆಂಮೀ. ಕಾಂಡದ ಗಾತ್ರ ಬುಡದಿಂದ ತುದಿಯ ಕಡೆ ಕಿರಿದಾಗುತ್ತ ಬರುವುದು. ತುದಿಯಲ್ಲಿ ಬಾಗಿದ ವಿಶಾಲವಾದ ಗರಿಗಳ ಕಿರೀಟ ಉಂಟು. ಗರಿಗಳು ಸುಮಾರು 5ಮೀ. ಅಗಲ ಮತ್ತು 6ಮೀ. ಉದ್ದ ಇರುವುವು. ಗರಿಗಳಲ್ಲಿ ಭಿನ್ನಪತ್ರಗಳ ಜೋಡಣೆಯಿದೆ. ಒಂದೊಂದು ಭಿನ್ನಪತ್ರವೂ 15 ಸೆಂಮೀ ಉದ್ದ, 8-10 ಸೆಂಮೀ ಅಗಲ ಇದೆ. ಬಗನಿ ಏಕಲಿಂಗ ಸಸ್ಯ. ವರ್ಷದ ಹೆಚ್ಚುಕಾಲ ಹೂಬಿಡುವುದು. ಹೂಗೊಂಚಲು ಸುಮಾರು 3-4 ಮೀ ಉದ್ದವಿರುವುದು. ಬಗನಿಹಣ್ಣು ಮೊದಲು ಕೆಂಪಾಗಿದ್ದು ಕ್ರಮೇಣ ಬಲಿತಂತೆ ಕಪ್ಪು ಬಣ್ಣಕ್ಕೆ ತಿರುಗುವುದು. ಹಣ್ಣಿನ ತಿರುಳು ಕಹಿ. ತಿಂದರೆ ನಾಲಗೆ ನವೆ ಉಂಟಾಗುತ್ತದೆ.

	ಬಗನಿ ಮರದಿಂದ ಉತ್ತಮ ನಾರು ದೊರೆಯುವುದು. ಈ ನಾರು ಉದ್ದವಾಗಿಯೂ ಶಕ್ತಿಯುತವಾಗಿಯೂ ಇದ್ದು ಮೃದುವಾಗಿ ಕುದುರೆ ಕೂದಲಿನಂತಿರುವುದು. ನಾರಿನಿಂದ ಹಗ್ಗ. ಬ್ರಷ್, ಪೊರಕೆ, ಬುಟ್ಟಿ, ಟೋಪಿ ಮೊದಲಾದುವನ್ನು ತಯಾರಿಸಬಹುದು. ಹಗ್ಗ ಬಹಳ ಗಟ್ಟಿ ಆಗಿರುವುದರಿಂದ ಶ್ರೀಲಂಕಾದಲ್ಲಿ ಆನೆ ಬಂಧಿಸಲು ಮತ್ತು ಹಡಗು ಕಟ್ಟಲು ಬಳಸುವುದಿದೆ. ಬಗನಿನಾರಿನಿಂದ ಮೀನು ಹಿಡಿಯುವ ಗಾಣದ ದಾರ, ಬಲೆ ಇತ್ಯಾದಿ ಮಾಡಲಾಗುವುದು.

	ಬಗನಿ ಮರದಲ್ಲಿ ಹೂ ಬರಲು ಪ್ರಾರಂಭವಾದಾಗಿನಿಂದ ಅದರ ಜೀವಮಾನವೆಲ್ಲ ಹೆಂಡ (ಕಳ್ಳು) ಇಳಿಸಬಹುದು. ಮಳೆಗಾಲ ವಿನಾ ವರ್ಷದ ಎಲ್ಲ ಕಾಲದಲ್ಲೂ ಹೆಂಡ ಇಳಿಸಲಾಗುವುದು. ಒಂದು ಮರದಿಂದ ವರ್ಷಕ್ಕೆ ಸುಮಾರು 802 ಲೀಟರ್ ಹೆಂಡ ಪಡೆಯಬಹುದು. ಮುಂಜಾನೆ ಇಳಿಸಿದ ಬಗನಿ ರಸ (ನೀರಾ) ಸಿಹಿಯಾದ ಹಾಗೂ ಆರೋಗ್ಯಕಾರಿಯಾದ ಪಾನೀಯ, ಬಿಸಿಲಿಗೊಡ್ಡಿ ಬಹಳ ಕಾಲ ಇಟ್ಟರೆ ಕ್ರಮೇಣ ಅದು ಹುಳಿಯಾಗಿ ಹೆಂಡವಾಗುತ್ತದೆ. ಆಗತಾನೆ ಇಳಿಸಿದ ರಸದಿಂದ ಉತ್ತಮ ಬೆಲ್ಲವನ್ನೂ ತಯಾರಿಸಬಹುದು, ಒಂದು ಗ್ಯಾಲನ್ ರಸದಿಂದ ಸುಮಾರು 0.6 ಕೆಜಿ ಬೆಲ್ಲ ದೊರೆಯುವುದು. ಬಗನಿ ರಸದಿಂದ ಸಾರಾಯಿ, ವಿನೆಗರ್ ಈಸ್ಟ್ ಮಾಡಬಹುದು. ಮರದ ಒಳಗಿರುವ ತಿರುಳಿನಿಂದ ಒಳ್ಳೆಯ ಸ್ಯಾಗೋ ತಯಾರಿಸಬಹುದು. ತಿರುಳಿನ ಪುಡಿಯಿಂದ ಗಂಜಿ, ಬ್ರೆಡ್ ಮಾಡಬಹುದು. ಬಗನಿಮರ ಗಟ್ಟಿಯಾಗಿದ್ದು ಬಾಳಿಕೆಬರುವುದರಿಂದ ಮನೆಕಟ್ಟುವುದಕ್ಕೆ ರೀಪು, ಪಿಕಾಸಿ ಮೊದಲಾದ ಮನೆಕಟ್ಟುವ ಉಪಕರಣಗಳ ತಯಾರಿಕೆಗೆ ಉಪಯುಕ್ತ. ಮರದ ಒಳಗಿನ ತಿರುಳು ತೆಗೆದು ನೀರು ಹಾಯಿಸಲು ಕೊಳಾಯಿ (ಒದಗೆ) ಮಾಡಬಹುದು. ಮರದ ಬುಡದ ತುಂಡಿನಿಂದ ಏತದಲ್ಲಿ ನೀರು ಎತ್ತಲು (ಮೋಟ್ಸ್) ಜಾತ್ರೆ, ಬಾಲ್ಡಿ ಸಲಕರಣೆ ಮಾಡಲಾಗುವುದು. ಬಗನಿ ಎಲೆ ಆನೆಗಳಿಗೆ ಒಳ್ಳೆಯ ಮೇವು. ಬಗನಿಕಾಯಿಯನ್ನು (ಬೀಜ) ಕುಶಲ ಕೈಗಾರಿಕೆಗಳಲ್ಲಿ ಬಳಸಿ ಗುಡಿ, ಮಣಿಸರ, ಮೊದಲಾದವನ್ನು ತಯಾರಿಸುವುದಿದೆ. ಬಗನಿಕಾಯಿಯನ್ನು ಅಡಕೆ ಜೊತೆ ಕಲಬೆರಕೆ ಮಾಡುವುದೂ ಉಂಟು.
(ಕೆ.ಟಿ.ಕೆ.; ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ